ಮಾಹಿತಿ ತಂತ್ರಜ್ಞಾನದ ಆರಂಭಿಕ ಕ್ರಿಯೆಗಳು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕ.ರಾ.ರ.ಸಾ.ನಿ.), ಪ್ರಯಾಣಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ, ಸೌಹಾರ್ದಯುತ, ಮಿತವ್ಯಯಕಾರಿ ಮತ್ತು ಪರಿಸರ ಸ್ನೇಹಿ ಸಾರಿಗೆ ಸೇವೆಗಳನ್ನು ಒದಗಿಸುವುದರೊಂದಿಗೆ, ಜಗತ್ತಿನ ಅತ್ಯುತ್ತಮ ಸಾರಿಗೆ ಸೇವಾ ಸಂಸ್ಥೆಯಾಗುವ ಮಹದಾಕಾಂಕ್ಷೆಯತ್ತ ದಾಪುಗಾಲು ಹಾಕುತ್ತಿದೆ. ಇದರೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ತನ್ನ ಆಡಳಿತ ಮತ್ತು ಕಾರ್ಯಾಚರಣೆ ಪ್ರಕ್ರಿಯೆಗಳಲ್ಲಿ,ಮಾಹಿತಿ ಹಾಗೂ ಸಂಪರ್ಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ರಾಜ್ಯ ಸಾರಿಗೆ ಉದ್ಯಮಗಳಲ್ಲಿ, ಕ.ರಾ.ರ.ಸಾ.ನಿ. ದೇಶದಲ್ಲೇ ಪ್ರಪ್ರಥಮ ಹಾಗೂ ಮುಂಚೂಣಿಯ ಸ್ಥಾನದಲ್ಲಿದೆ. ತನ್ನ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡು, ಪ್ರತಿ ಸಿಬ್ಬಂದಿಯನ್ನು ಮಾಹಿತಿ ತಂತ್ರಜ್ಞಾನದ ಜಾಲದಡಿಗೆ ತರುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಕ.ರಾ.ರ.ಸಾ.ನಿ. ತನ್ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವುದರೊಂದಿಗೆ, ತನ್ನ ದಕ್ಷತೆಯನ್ನು ಹೆಚ್ಚಿಸಿಕೊಳ್ಳುವತ್ತ ಮತ್ತು ಕಾರ್ಯಕಾರಿ ವೆಚ್ಚಗಳನ್ನು ಕಡಿಮೆ ಮಾಡುವತ್ತ, ಮಾಹಿತಿ ತಂತ್ರಜ್ಞಾನ ಸಾಧನಗಳನ್ನು ಅತಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ.

ಕ.ರಾ.ರ.ಸಾ.ನಿಗಮವು ಈ ಕೆಳಕಂಡ ಮಾಹಿತಿ ತಂತ್ರಜ್ಞಾನ ಸೌಲಭ್ಯಗಳನ್ನು ಪರಿಚಯಿಸಿರುವ ಭಾರತದ ಪ್ರಥಮ ರಾಜ್ಯ ಸಾರಿಗೆ ಉದ್ಯಮ:

 • ಆರ್.ಡಿ.ಬಿ.ಎಮ್.ಎಸ್. ಆಧಾರಿತ ಪ್ರಯಾಣಿಕರ ಆಸನ ಕಾಯ್ದಿರಿಸುವ ವ್ಯವಸ್ಥೆ (1998 ರಲ್ಲಿ)
 • ಅಂತರ್ಜಾಲ ತಾಣ (1997ರಲ್ಲಿ)
 • ಗಣಕೀಕೃತ ನೇಮಕಾತಿ ವ್ಯವಸ್ಥೆ (1997 ರಿಂದ)
 • ಈ -ಟೆಂಡರೀಕರಣ
 • ಆರೆಕಲ್ ಫೈನಾನ್ಷಿಯಲ್ಸ್
 • ಎಲ್ಲ ಮಾರ್ಗಗಳಲ್ಲಿ ವಿದ್ಯುನ್ಮಾನ ಟಿಕೆಟ್ ವಿತರಣಾ ಯಂತ್ರಗಳ ಬಳಕೆ
 • ಚಾಲಕರ ಪರೀಕ್ಷೆಗಾಗಿ ಗಣಕೀಕೃತ ಚಾಲನಾ ಮಾರ್ಗ
 • ಅಂತರ್ಜಾಲ ಆಧಾರಿತ ಪ್ರಯಾಣಿಕರ ಆಸನ ಕಾಯ್ದಿರಿಸುವ ವ್ಯವಸ್ಥೆ (2006 ರಿಂದ)

ಕ.ರಾ.ರ.ಸಾ.ನಿಗಮದ ದ ಪ್ರಮುಖ ಮಾಹಿತಿ ತಂತ್ರಜ್ಞಾನ ಆಧಾರಿತ ಯೋಜನೆಗಳು

 • ವಿದ್ಯುನ್ಮಾನ ಟಿಕೆಟ್ ವಿತರಣಾ ಯಂತ್ರಗಳು
 • ಯಾವ ಸಮಯದಲ್ಲಾದರೂ, ಎಲ್ಲಿಂದಲಾದರೂ ಮುಂಗಡ ಕಾಯ್ದಿರಿಸುವಿಕೆ ವ್ಯವಸ್ಥೆ (AWATAR)
 • ನಿಪುಣ ಚಾಲಕರ ಆಯ್ಕೆಗಾಗಿ ಗಣಕೀಕೃತ ಚಾಲನಾ ಮಾರ್ಗ

1. ವಿದ್ಯುನ್ಮಾನ ಟಿಕೆಟ್ ವಿತರಣಾ ಯಂತ್ರಗಳು (ಈ.ಟಿ.ಎಂ.)

ಆಗಸ್ಟ್ 15, 2004 ರಂದು ಉದ್ಘಾಟಿಸಿದ ವಿದ್ಯುನ್ಮಾನ ಟಿಕೆಟ್ ವಿತರಣಾ ಯಂತ್ರಗಳ ಬಳಕೆಯೊಂದಿಗೆ, ಕ.ರಾ.ರ.ಸಾ.ನಿಗಮವು ಭಾರತದಲ್ಲೇ, ಹಲವಾರು ಅನ್ವಯಿಕ ತಂತ್ರಾಂಶಗಳನ್ನು ಒಳಗೊಂಡ ವಿದ್ಯುನ್ಮಾನ ಟಿಕೆಟ್ ವಿತರಣಾ ಯಂತ್ರಗಳನ್ನು ಉಪಯೋಗಿಸಲು ಆರಂಭಿಸಿದ ಮೊದಲ ಸಾರ್ವಜನಿಕ ಸಾರಿಗೆ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಟಿಕೆಟ್, ಇಂಧನ ಬಳಕೆ, ಕಿ.ಮೀ. ಕಾರ್ಯಾಚರಣೆ, ಮಾರ್ಗ ತನಿಖೆ ಇತ್ಯಾದಿ ವಿವರಗಳನ್ನು ಈ.ಟಿ.ಯಂ. ಸರಾಗವಾಗಿ ದಾಖಲಿಸುತ್ತದೆ. ಪ್ರತಿಯೊಂದು ಮಾರ್ಗದ ಕಾರ್ಯಾಚರಣೆಯ ನಂತರ, ಈ ಯಂತ್ರದಿಂದ ಪ್ರತಿ ಕಿ.ಮೀ.ನ ಗಳಿಕೆ, ಪ್ರತಿ ಲೀಟರ್ ಡೀಸೆಲ್‍ಗೆ ಓಡಿದ ಕಿ.ಮೀ ಗಳು, ಶೇಕಡಾವಾರು ರದ್ದಾದ ಕಿ.ಮೀ ಗಳು, ಬಸ್ ತನಿಖೆ ವಿವರಗಳಂತಹ ಮಹತ್ವಪೂರ್ಣ ನಿಯತಾಂಕಗಳ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ವಿದ್ಯುನ್ಮಾನ ಟಿಕೆಟ್ ಯಂತ್ರಗಳ ಬಳಕೆ ಭಾರತದಲ್ಲಿ ಈಗಷ್ಟೇ ಆರಂಭಿಕ ಹಂತದಲ್ಲಿದ್ದು, ಕ.ರಾ.ರ.ಸಾ.ನಿ.ವು ಮುಂಚೂಣಿಯ ಸ್ಥಾನದಲ್ಲಿದೆ. ಇದರ ದಕ್ಷ ಕಾರ್ಯ ಸಾಮರ್ಥ್ಯ ಮತ್ತು ಅದರಿಂದಾಗುವ ಲಾಭಗಳ ಬಗ್ಗೆ ಮನದಟ್ಟಾಗಿರುವ ಇತರೆ ನಿಗಮಗಳೂ ವಿದ್ಯುನ್ಮಾನ ಟಿಕೆಟ್ ಯಂತ್ರಗಳ ಬಳಕೆಯನ್ನು ಕಾರ್ಯಾಚರಣೆಗೆ ತರುತ್ತಿವೆ.

ವಿದ್ಯುನ್ಮಾನ ಟಿಕೆಟ್ ಯಂತ್ರಗಳ ಬಳಕೆಯಿಂದಾಗುವ ಪ್ರಯೋಜನಗಳು

 • ಮುದ್ರಣ ಮತ್ತು ಸ್ಟೇಷನರಿ ಸಂಬಂಧಿತ ವೆಚ್ಚಗಳಲ್ಲಿ ಕಡಿತ.
 • ಸಂಚಾರ ಮಾದರಿಯ ತ್ವರಿತ ವಿಶ್ಲೇಷಣೆ.
 • ವೈಜ್ಞಾನಿಕ ಮಾಹಿತಿಯ ಲಭ್ಯತೆಯಿಂದ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯಕ.
 • ನಿರ್ವಾಹಕರಿಗೆ ಆಯಾಸರಹಿತ ಕಾರ್ಯಾಚರಣೆಗೆ ಅನುವಾಗುತ್ತದೆ.
 • ಉತ್ತಮ ಕಾರ್ಮಿಕ ಸಂಬಂಧಗಳು.
 • ವಿದ್ಯುನ್ಮಾನ ಟಿಕೆಟ್ ಯಂತ್ರಗಳ ಬಳಕೆಯಿಂದ ಆದಾಯ ಸೋರಿಕೆಯ ಯಾವುದೇ ಸಾಧ್ಯತೆ ಇಲ್ಲದಿರುವುದರ ಫಲಿತಾಂಶವಾಗಿ, ಸಾರಿಗೆ ಆದಾಯದಲ್ಲಿ 4 ರಿಂದ 5 % ಹೆಚ್ಚಳ ದಾಖಲಾಗಿದೆ.
 • ಬಸ್ ಸೇವೆಗಳು ಚಾಲಕ ಕಂ ನಿರ್ವಾಹಕರಿಂದ ನಿರ್ವಹಿಸಲ್ಪಡುವಾಗ, ವಿದ್ಯುನ್ಮಾನ ಟಿಕೆಟ್ ಯಂತ್ರಗಳು ಅತ್ಯಂತ ಸಹಾಯಕಾರಿ.
 • ವಿದ್ಯುನ್ಮಾನ ಟಿಕೆಟ್ ಯಂತ್ರಗಳಿಂದ ಲಭ್ಯವಾಗುವ ಟಿಕೆಟ್ ಗಳು ಕನ್ನಡದಲ್ಲಿ ಮುದ್ರಿತ.
 • ಮೊದಲಿನ ಪೂರ್ವ ಮುದ್ರಿತ, ಮಾನವ ನಿರ್ವಹಿತ ಟಿಕೆಟ್ ವ್ಯವಸ್ಥೆಗಿಂತ ಅತಿ ವಿಭಿನ್ನವಾಗಿ, ವಿದ್ಯುನ್ಮಾನ ಟಿಕೆಟ್ ಯಂತ್ರ ಮುದ್ರಿತ ಟಿಕೆಟ್ ಗಳು ಘಟಕದ ಹೆಸರು, ಸ್ಥಳದ ಹೆಸರು, ಪ್ರಯಾಣ ದರ ಇತ್ಯಾದಿ ವಿವರಗಳನ್ನು ಪ್ರಯಾಣಿಕರಿಗೆ ಒದಗಿಸುತ್ತವೆ.
 • ಪ್ರಯಾಣಿಕರು ಈ ಟಿಕೆಟ್ ಅನ್ನು ಸಾಕ್ಷಿ ದಾಖಲೆಯಂತೆ ಬಳಸಬಹುದಾಗಿದೆ.

2. ಯಾವ ಸಮಯದಲ್ಲಾದರೂ, ಎಲ್ಲಿಂದಲಾದರೂ ಮುಂಗಡ ಕಾಯ್ದಿರಿಸುವಿಕೆ ವ್ಯವಸ್ಥೆ (AWATAR)

ಏಪ್ರಿಲ್ 29, 2006 ರಿಂದ ಅಂತರ್ಜಾಲ ಆಧಾರಿತ ಪ್ರಯಾಣಿಕರ ಆಸನ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಜಾರಿಗೆ ತರುವುದರೊಂದಿಗೆ, ಕ.ರಾ.ರ.ಸಾ.ನಿ. ಭಾರತದಲ್ಲಿ ಅಂತರ್ಜಾಲ ಆಧಾರಿತ ಆಸನ ಕಾಯ್ದಿರಿಸುವಿಕೆಯನ್ನು ಚಾಲ್ತಿಗೆ ತಂದ ಪ್ರಥಮ ರಾಜ್ಯ ಸಾರಿಗೆ ಉದ್ಯಮವಾಗಿದೆ. ಈಗ ಕ.ರಾ.ರ.ಸಾ.ನಿ. ಕರ್ನಾಟಕದಾದ್ಯಂತ ಹಾಗು ಇತರೆ ಪ್ರಮುಖ ಕಾರ್ಯ ನಿರ್ವಹಣಾ ಸ್ಥಳಗಳ ತನ್ನ ಯಾವುದೇ ಮುಂಗಟ್ಟೆ ಅಥವಾ ವ್ಯವಹಾರ ವಿತರಣಾ ಮುಂಗಟ್ಟೆಗಳಲ್ಲಿ, ಯಾವುದೇ ಸ್ಥಳದಿಂದ ಯಾವುದೇ ಸ್ಥಳಕ್ಕೆ ಆಸನ ಕಾಯ್ದಿರಿಸುವ ಸೌಲಭ್ಯವನ್ನು ಒದಗಿಸುತ್ತಿದೆ. ಈ ಸೌಲಭ್ಯ ನಿಗಮಕ್ಕೆ ಉತ್ತಮ ಆದಾಯ ತರುವುದರೊಂದಿಗೆ, ಖಾಸಗಿ ವ್ಯವಹಾರ ವಿತರಕರಿಗೂ ಲಾಭದಾಯಕ ಹಾಗೂ ಹೆಚ್ಚು ವ್ಯವಹಾರ ಒದಗಿಸುವ ವ್ಯವಸ್ಥೆಯಾಗಿದೆ. ಅದಲ್ಲದೇ ಪ್ರಯಾಣಿಕರಿಗೆ ಬಹು ಅನುಕೂಲಕರವಾಗಿರುವ ಈ ಸೌಲಭ್ಯ, ಸರ್ವತೋಮುಖವಾಗಿಯೂ ಒಂದು ಯಶಸ್ವಿ ಪ್ರಯೋಗವಾಗಿ ನಿರೂಪಿತವಾಗಿದೆ.

AWATAR ವ್ಯವಸ್ಥೆಯ ಪ್ರಯೋಜನಗಳು

 • ಈ ಸೌಕರ್ಯವನ್ನು ಉಪಯೋಗಿಸುತ್ತಿರುವ ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಕರ್ನಾಟಕದಾದ್ಯಂತ ಹಾಗೂ ಕರ್ನಾಟಕದ ಹೊರಗೆ ಪ್ರಮುಖ ಸ್ಥಳಗಳಲ್ಲಿ ಇರುವ 346 ಮುಂಗಟ್ಟೆಗಳಿಂದ, ಪ್ರತಿದಿನ ಕಾಯ್ದಿರಿಸುವ ಸರಾಸರಿ ಆಸನಗಳ ಸಂಖ್ಯೆ 15000 ಕ್ಕೆ ಏರಿ, ಪ್ರತಿದಿನ ೬೦ ಲಕ್ಷ ಆದಾಯವನ್ನು ದಾಖಲಿಸುತ್ತಿದೆ. ರಜೆ ದಿನಗಳು ಮತ್ತು ಹಬ್ಬ ಹರಿದಿನಗಳಂತಹ ವಿಶೇಷ ದಿನಗಳಲ್ಲಿ, 25,000 ಟಿಕೆಟ್ ಗಳ ಕಾಯ್ದಿರಿಸುವಿಕೆಯೊಂದಿಗೆ, ಸಂಸ್ಥೆಯ ಆದಾಯ 90 ಲಕ್ಷಗಳನ್ನೂ ದಾಟಿದ ದಾಖಲೆಯಿದೆ.
 • ಕ.ರಾ.ರ.ಸಾ.ನಿ. ಒಟ್ಟಾರು ಮುಂಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ನಿರುದ್ಯೋಗಿ ಪದವೀಧರರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದೆ. ತನ್ಮೂಲಕ ಈ ಪದವೀಧರರಿಗೆ ಕ.ರಾ.ರ.ಸಾ.ನಿ. ವ್ಯವಹಾರ ವಿತರಕರಾಗುವ ಅವಕಾಶವನ್ನೂ ಒದಗಿಸುತ್ತಿದೆ. AWATAR ವ್ಯವಸ್ಥೆಯ ಪರಿಚಯದಿಂದ ಪ್ರಯಾಣಿಕರು, ಯಾವುದೇ ಸ್ಥಳದಿಂದ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ಯೋಜನೆ ಮಾಡಲು ಹಾಗೂ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಿದಂತಾಗಿದೆ. ಇಂತಹ ಸರಳ ಮತ್ತು ಆರಾಮದಾಯಕ ವ್ಯವಸ್ಥೆಯಿಂದ ಪ್ರಯಾಣಿಕರು ಇತರೆ ಸಾರಿಗೆಗಳ ಬದಲಾಗಿ ಕ.ರಾ.ರ.ಸಾ.ನಿ. ವನ್ನು ತಮ್ಮ ಪ್ರಯಾಣಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ದಿನೇ-ದಿನೇ ಹೆಚ್ಚುತ್ತಿರುವ ನಿಗಮದ ಕಾಯ್ದಿರಿಸುವಿಕೆ ಆದಾಯ ಈ ಸಂಗತಿಗೆ ಸಾಕ್ಷಿಯಾಗಿದೆ
 • ಈಗ ಕ.ರಾ.ರ.ಸಾ.ನಿ. ಪ್ರಯಾಣಿಕರಿಗೆ ಡೆಬಿಟ್/ಕ್ರೆಡಿಟ್ ಕಾರ್ಡ್‍ಗಳನ್ನು ಬಳಸಿ ಈ-ಕಾಯ್ದಿರಿಸುವಿಕೆ ಮೂಲಕ ನೇರವಾಗಿ ಟಿಕೆಟ್ ಕಾಯ್ದಿರಿಸುವ ಅವಕಾಶವನ್ನು ಒದಗಿಸಿದೆ. ಇತ್ತೀಚೆಗೆ ಮೊಬೈಲ್ ಮೂಲಕವೂ ಆಸನ ಕಾಯ್ದಿರಿಸುವ ವ್ಯವಸ್ಥೆಯನ್ನು ಕ.ರಾ.ರ.ಸಾ.ನಿ. ಕಲ್ಪಿಸಿದೆ.
 • ಕ.ರಾ.ರ.ಸಾ.ನಿ. AWATAR ವ್ಯವಸ್ಥೆ, ವಿದೇಶೀ ಗ್ರಾಹಕರನ್ನೂ ಒಳಗೊಂಡಂತೆ, 2 ಲಕ್ಷಕ್ಕೂ ಹೆಚ್ಚು ನೋಂದಾಯಿತ ಗ್ರಾಹಕರನ್ನು ಹೊಂದಿದೆ. ಪ್ರತಿ ತಿಂಗಳು ಅಂದಾಜು 6 ಲಕ್ಷದಷ್ಟು ಅಂತರ್ಜಾಲ ತಾಣ ಭೇಟಿಗಳು ಹಾಗೂ 94 ಲಕ್ಷ ಪುಟ ವೀಕ್ಷಣೆಗಳು ದಾಖಲಿತಗೊಂಡಿವೆ. ಸರಾಸರಿ ಪ್ರತಿ ಅಂತರ್ಜಾಲ ಭೇಟಿಯಲ್ಲಿ 16.08 ಪುಟಗಳು ವೀಕ್ಷಿಸಲ್ಪಡುತ್ತವೆ.
 • ಹೊಟೆಲ್ ಕಾಯ್ದಿರಿಸುವಿಕೆ, ಬೆಂಗಳೂರುಒನ್ ಮುಂಗಟ್ಟೆಗಳೊಂದಿಗೆ ಸಹಯೋಗ, ಕೊರಿಯರ್ ಮತ್ತು ಪಾರ್ಸೆಲ್‍ಗಳ ಕಾಯ್ದಿರಿಸುವಿಕೆಯಂತಹ ಮೌಲ್ಯಾಧಾರಿತ ಸೇವೆಗಳೂ ಲಭ್ಯವಿವೆ.

3. ನಿಪುಣ ಚಾಲಕರ ಆಯ್ಕೆಗಾಗಿ ಗಣಕೀಕೃತ ಚಾಲನಾ ಮಾರ್ಗ

ಕ.ರಾ.ರ.ಸಾ.ನಿ. ಸಂಪೂರ್ಣ ಗಣಕೀಕೃತ ಚಾಲಕ ನೇಮಕಾತಿ ಪ್ರಕ್ರಿಯೆಯನ್ನು ಪರಿಚಯಿಸಿದ ಮೊದಲ ರಾಜ್ಯ ಸಾರಿಗೆ ಸಂಸ್ಥೆ. ಸುರಕ್ಷಿತ ಚಾಲನೆಯ ಭರವಸೆಯನ್ನು ಪ್ರತಿ ಪಯಣಿಗ, ಯಾವುದೇ ಸಾರ್ವಜನಿಕ ಸಾರಿಗೆ ಸಂಸ್ಥೆಯಿಂದ ಅಪೇಕ್ಷಿಸುತ್ತಾನೆ. ಇದಕ್ಕಾಗಿ ಬಸ್ ಅನ್ನು ನಿಯಂತ್ರಿಸಲು ನಿಪುಣ ಚಾಲಕರ ಅವಶ್ಯಕತೆಯಿದೆ. ಯಾವುದೇ ಸಾರ್ವಜನಿಕ ಸಾರಿಗೆ ಸಂಸ್ಥೆಯ ಚಾಲಕರನ್ನು ಆಯ್ಕೆ ಮಾಡಲು ಅತಿ ಕಟ್ಟು-ನಿಟ್ಟಾದ ಚಾಲನಾ ಪರೀಕ್ಷೆಯ ವ್ಯವಸ್ಥೆ, ಸಾರ್ವಜನಿಕರಲ್ಲಿ ವಿಶ್ವಾಸರ್ಹತೆ ಮತ್ತು ಸುರಕ್ಷತೆಯ ಭಾವವನ್ನು ಮೂಡಿಸುತ್ತದೆ. ಈ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಚಾಲಕರ ಆಯ್ಕೆಗಾಗಿ ವಿದ್ಯುನ್ಮಾನ ಚಾಲನ ವ್ಯವಸ್ಥೆಯನ್ನು ಅಳವಡಿಸುವುದರೊಂದಿಗೆ ಶ್ಲಾಘನೀಯ ಕೆಲಸವನ್ನು ಮಾಡಿದೆ. ಈ ವ್ಯವಸ್ಥೆ ಡಿಜಿಟಲ್ ತಂತ್ರಜ್ಞಾನದಿಂದ ನಿರ್ವಹಿಸಬಲ್ಲ ಹಾಗೂ ದ್ಯುತಿ ಸಂವೇದನಾವಾಹಕಗಳ ಮೇಲೆ ಆಧಾರಿತವಾಗಿದೆ.ಅಭ್ಯರ್ಥಿಯ ಎತ್ತರ ಮತ್ತು ತೂಕ ನಮೂದಿಸುವುದಕ್ಕಾಗಿ ಮೈತೂಕತೋರುವ ಅಳೆಯುವ ಸಾಧನವನ್ನು ಗಣಕಯಂತ್ರಕ್ಕೆ ಜೋಡಿಸಲಾಗುತ್ತದೆ ಮತ್ತು ವೆಬ್ ಕ್ಯಾಮೆರಾದಿಂದ ಅಭ್ಯರ್ಥಿಯ ಛಾಯಾಚಿತ್ರವನ್ನು ತೆಗೆದುಕೊಳ್ಳಲಾಗುತ್ತದೆ. ಅರ್ಹ ಅಭ್ಯರ್ಥಿಯು ಕಟ್ಟು ನಿಟ್ಟಾದ s ಆಕಾರದ ಮಾರ್ಗದಲ್ಲಿ, ಮುಂಭಾಗದ 8 ಆಕಾರದ ಮಾರ್ಗದಲ್ಲಿ, ಏರು ಪ್ರದೇಶದಲ್ಲಿ ಹಾಗೂ ಹಿಮ್ಮುಖವಾಗಿ ವಾಹನ ಚಲಾಯಿಸುವ ರೀತಿಯಲ್ಲಿ ಬಸ್ ಚಾಲನೆ ಮಾಡಬೇಕಾಗುತ್ತದೆ. ಕೊನೆಯ ಪರೀಕ್ಷೆಯಾಗಿ ಅಭ್ಯರ್ಥಿಯು ಸಂಚಾರ ಸಂಕೇತಗಳನ್ನು ಮತ್ತು ಅದಕ್ಕೆ ಸರಿ ಹೊಂದುವ ಟಿಪ್ಪಣಿಗಳನ್ನು ಗಣಕ ಯಂತ್ರದಲ್ಲಿ ಹೊಂದಿಸಿ ಬರೆಯಬೇಕಾಗುತ್ತದೆ.ಗಣಕೀಕೃತ ಚಾಲಕ ನೇಮಕಾತಿ ವ್ಯವಸ್ಥೆಯು ಚಾಲನಾ ಪರೀಕ್ಷೆಯ ಫಲಿತಾಂಶವನ್ನು ಒದಗಿಸುತ್ತದೆ.

ಪ್ರಯೋಜನಗಳು:

 • ಚಾಲಕ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ಗಣಕೀಕರಣವಾಗಿದ್ದು, ಇಡೀ ವ್ಯವಸ್ಥೆಯನ್ನು ಪಾರದರ್ಶಕವಾಗಿಸುತ್ತದೆ.
 • ಕಡಿಮೆ ಸಮಯದಲ್ಲಿ ಹೆಚ್ಚು ಅಭ್ಯರ್ಥಿಗಳನ್ನು ಈ ವ್ಯವಸ್ಥೆಯಿಂದ ಪರೀಕ್ಷಿಸಬಹುದಾಗಿದೆ. ಹಾಗೂ ಚಾಲನಾ ಪರೀಕ್ಷೆಯು ಎಲ್ಲಾ ಅಭ್ಯರ್ಥಿಗಳಿಗೆ ಒಂದೇ ತೆರನಾಗಿದ್ದು,ಪ್ರತಿ ಅಭ್ಯರ್ಥಿಯೂ ವಾಸ್ತವಿಕ ರಸ್ತೆ ಪರಿಸ್ಥಿತಿಗಳನ್ನು ಹೋಲುವ ಸಕಲ ಪರೀಕ್ಷೆ ಮತ್ತು ಉಪ-ಪರೀಕ್ಷೆಗಳಲ್ಲಿ ತಮ್ಮಚಾಲನಾ ನಿಪುಣತೆಯನ್ನು ತೋರಿಸಬೇಕಾಗುತ್ತದೆ.
 • ಸುರಕ್ಷತೆಯನ್ನೂ ಈ ಪರೀಕ್ಷೆ ಖಾತರಿ ಪಡಿಸುತ್ತದೆ.ಚಾಲಕ ನೇಮಕಾತಿಯ ಸಂಪೂರ್ಣ ಪ್ರಕ್ರಿಯೆ ಸಾರ್ವಜನಿಕರ ಹಾಗೂ ವಿಶೇಷವಾಗಿ ಸಾರ್ವಜನಿಕ ಸಾರಿಗೆ ನಿಗಮಗಳ ಪ್ರಶಂಸೆಯನ್ನು ಗಳಿಸಿದೆ.

Last updated date 01-11-2019 03:15 AM
Custom Search
Sort by:
Relevance
Relevance
Date